ಡೇಲಿ ಮೇಲ್
ಇಂಗ್ಲೆಂಡಿನ ಒಂದು ಜನಪ್ರಿಯ ರಾಷ್ಟ್ರೀಯ ಇಂಗ್ಲಿಷ್ ದಿನಪತ್ರಿಕೆ. 1896ರ ಮೇ 4ರಂದು ಆಲ್ಫ್ರೆಡ್ ಮತ್ತು ಹ್ಯಾರಲ್ಡ್ ಹಾಮ್ರ್ಸ್‍ವರ್ತರಿಂದ ಲಂಡನಿನಲ್ಲಿ ಆರಂಭವಾಯಿತು. ಪರಿಮಿತ ವರಮಾನ ಉಳ್ಳವರು ಕೊಳ್ಳುವುದು ಸಾಧ್ಯವಾಗುವಂತೆ ಇದರ ಬಿಡಿಸಂಚಿಕೆಗೆ ಅರ್ಧ ಪೆನಿ ಬೆಲೆ ಇಡಲಾಯಿತು. ಎಲ್ಲರಿಗೂ ಸುಲಭಗ್ರಾಹ್ಯವಾದ ಭಾಷೆಯಲ್ಲಿ ಪ್ರಕಟವಾಗತೊಡಗಿದ ಈ ಪತ್ರಿಕೆ ಆರಂಭದಿನದಿಂದಲೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯತೊಡಗಿದ ಈ ಪತ್ರಿಕೆ ಆರಂಭದಿನದಿಂದಲೇ ಯಶಸ್ಸಿನ ಹಾದಿಯಲ್ಲಿ ಮುನ್ನಡೆತೊಡಗಿತು. ಮೊದಲ ದಿನದಂದೇ ಇದರ 3,97,215 ಪ್ರತಿಗಳು ಮಾರಾಟವಾದುವು. 1900ರ ವೇಳೆಗೆ ಇದರ ಪ್ರಸಾರ 10,00,000ದ ಗೆರೆ ಮುಟ್ಟಿತ್ತು. 1929ರಲ್ಲಿ 20,00,000 ಕ್ಕೆ ಏರಿತು. 1972ರಲ್ಲಿದ್ದಂತೆ ಈ ಪತ್ರಿಕೆಯ ಪ್ರಸಾರ 17,10,141.

	1905ರಲ್ಲಿ ಆಲ್ಫ್ರೆಡ್ ಹಾಮ್ಸ್‍ವರ್ತ್ (ಅನಂತರ ವೈಕೌಂಟ್ ನಾರ್ತ್‍ಕ್ಲಿಫ್) ಪ್ಯಾರಿಸಿನಲ್ಲಿ ಕಾಂಟಿನೆಂಟಲ್ ಡೇಲಿ ಮೇಲ್ ಆರಂಭಿಸಿದರು. ಮಾಂಚೆಸ್ಟರ್ ಮತ್ತು ಎಡಿನ್‍ಬರೊದಲ್ಲೂ ಡೇಲಿ ಮೇಲ್ ಪ್ರಕಟವಾಗತೊಡಗಿತು. ಆಲ್ಪ್ರೆಡ್ ಹಾಮ್ಸ್‍ವರ್ತ್‍ರವರಿಗೆ ಒಳ್ಳೆಯ ಸಂಘಟನಾ ಸಾಮಥ್ರ್ಯವಿತ್ತು. ಅವರು ಸಮರ್ಥ ಸಂಪಾದಕರೂ ಆಗಿದ್ದ. ಪುಟ್ಟ ಪ್ಯಾರಗಳ ಸೌಲಭ್ಯವನ್ನು ಮೊಟ್ಟಮೊದಲಿಗೆ ಅರಿತು ಸಂಪೂರ್ಣವಾಗಿ ಬೆಳೆಸಿಕೊಂಡವರು. ಮುದ್ರಣಕ್ಕೆ ಸಂಬಂಧಿಸಿದಂತೆ ಅವನು ನಾನಾ ಪ್ರಯೋಗಗಳನ್ನು ಮಾಡಿದರು. ಅವುಗಳಲ್ಲಿ ಹಲವು ಇಂದಿಗೂ ಬಳಕೆಯಲ್ಲಿವೆ. 

	ಒಂದನೆಯ ಮಹಾಯುದ್ಧದ ಕಾಲದಲ್ಲಿ ಡೇಲಿ ಮೇಲ್ ಸಲ್ಲಿಸಿದ ಸೇವೆ ಮಹತ್ತರವಾದ್ದು. ಶಸ್ತ್ರಾಸ್ತ್ರಗಳಿಲ್ಲದೆ ಫ್ರಾನ್ಸಿನಲ್ಲಿ ತೊಂದರೆಗೆ ಈಡಾಗಿದ್ದ ಬ್ರಿಟಿಷ್ ಸೈನಿಕರ ಪಾಡನ್ನು ಬಯಲಿಗೆ ಎಳೆದದ್ದು ಇದರ ಒಂದು ಪ್ರಶಂಸಾರ್ಹ ಸಾಧನೆ. ಆಗಿನ ಬ್ರಿಟಿಷ್ ಸರ್ಕಾರದ ರಕ್ಷಣಾನೀತಿಯನ್ನು ಪತ್ರಿಕೆ ಕಟುವಾಗಿ ಟೀಕಿಸಿತು. ರಕ್ಷಣಾ ಸಚಿವ ಲಾರ್ಡ್ ಕಿಚನರ್ ಬೆಂಬಲಿಗರು ಇದರಿಂದ ಕೋಪಗೊಂಡು ಡೇಲಿ ಮೇಲಿನ ಪ್ರತಿಗಳನ್ನು ಸುಟ್ಟರು. ಪತ್ರಿಕೆಯ ಪ್ರಸಾರ ಕ್ಷಯಿಸಿತು. ಆದರೂ ಹಾಮ್ರ್ಸ್‍ವರ್ತ್ ಎದೆಗುಂದಲಿಲ್ಲ. ತಮ್ಮ ಟೀಕಾಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿದರು. ಕ್ರಮೇಣ ಬ್ರಿಟಿಷ್ ಜನತೆಗೆ ಸತ್ಯದ ಅರಿವಾಯಿತು. ಸಾರ್ವಜನಿಕ ಅಭಿಪ್ರಾಯಕ್ಕೆ ಸರ್ಕಾರ ಮಣಿಯಬೇಕಾಯಿತು. ಬ್ರಿಟನಿನ ರಕ್ಷಣಾ ನೀತಿ ಬದಲಾಯಿತು. ಡೇಲಿ ಮೇಲ್ ಕೀರ್ತಿ ಹೆಚ್ಚಿತು. ಅದರ ಪ್ರಸಾರ ಹೊಸ ಮಜಲುಗಳನ್ನು ಕಂಡಿತು. ಪ್ರಖ್ಯಾತ ಸಾಹಿತಿ ಎಡ್ಗರ್ ವ್ಯಾಲೇಸ್ ಸ್ವಲ್ಪ ಕಾಲ ಡೇಲಿ ಮೇಲಿನ ವರದಿಗಾರರಾಗಿದ್ದರು.

	ಈ ಮಧ್ಯೆ ಕೆಲವು ಮಾನನಷ್ಟ ಮೊಕದ್ದಮೆಗಳಿಂದ ಪತ್ರಿಕೆ ಸ್ವಲ್ಪಕಾಲ ತೊಂದರೆ ಅನುಭವಿಸಬೇಕಾಯಿತು. ಆಲ್ಫ್ರೆಡ್ ಹಾಮ್ರ್ಸ್‍ವರ್ತ್ ಮರಣಾನಂತರ (1922) ಅವರ ಸೋದರ ಲಾರ್ಡ್ ರೋದರ್‍ಮಿಯರ್ ಹತೋಟಿಗೆ ಪತ್ರಿಕೆ ಒಳಪಟ್ಟಿತ್ತು. 1937ರಲ್ಲಿ ಅವರು ನಿವೃತ್ತಿ ಹೊಂದಿದಾಗ ಅವರ ಮಗ ಅದರ ನಿರ್ವಹಣೆಯ ಹೊಣೆ ವಹಿಸಿಕೊಂಡರು. 1920ರ ದಶಕದ ಉತ್ತರಾರ್ಧದಲ್ಲಿ ಮತ್ತು ಮುಂದಿನ ದಶಕದ ಪ್ರಥಮಾರ್ಧದಲ್ಲಿ ಪ್ರಸಾರದಲ್ಲಿ ಡೇಲಿ ಮೇಲನ್ನು ಮೀರಿಸುವ ಪತ್ರಿಕೆ ಪ್ರಪಂಚದಲ್ಲೇ ಇರಲಿಲ್ಲ. 1960ರಲ್ಲಿ ಡೇಲಿ ಎಕ್ಸ್‍ಪ್ರೆಸ್ ಮತ್ತು ಡೇಲಿ ಮಿರರ್ ಪತ್ರಿಕೆಗಳು ಪ್ರಸಾರದಲ್ಲಿ ಇದನ್ನು ಮೀರಿಸಿದುವು. ಈ ಪತ್ರಿಕೆಯ ಒಡೆತನ ಹೊಂದಿರುವ ಅಸೋಸಿಯೇಟೆಡ್ ನ್ಯೂಸ್‍ಪೇಪರ್ಸ್ ಲಿಮಿಟೆಡ್ ಸಂಸ್ಥೆ 1960ರಲ್ಲಿ ನ್ಯೂಸ್ ಕ್ರಾನಿಕಲ್ ಪತ್ರಿಕೆಯನ್ನೂ 1971ರಲ್ಲಿ ಡೇಲಿ ಸ್ಕೆಚ್ ಪತ್ರಿಕೆಯನ್ನೂ ಕೊಂಡುಕೊಂಡಿತು. ಪತ್ರಿಕೆಯ ಈಗಿನ ಸಂಪಾದಕರು ಡೇವಿಡ್ ಇಂಗ್ಲಿಷ್. ಸಂಸ್ಥೆಯ ಅಧ್ಯಕ್ಷರು ವಿಯರ್ ಹಾಮ್ರ್ಸ್‍ವರ್ತ್. ಸಂಜೆ ಪ್ರಕಟವಾಗುವ ದಿ ಈವ್‍ನಿಂಗ್ ನ್ಯೂಸ್ ಎಂಬುದು ಇದರ ಸೋದರಪತ್ರಿಕೆ. 
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ